ಪಾಲಿಬಿಯಸ್
ಕ್ರಿ.ಪೂ. 205 ? - ಕ್ರಿ.ಪೂ. 125 ? ಗ್ರೀಕ್ ಇತಿಹಾಸಕಾರ. ಇತಿಹಾಸಶಾಸ್ತ್ರದ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿರುವುದಲ್ಲದೆ ರಾಜಕಾರಣಿಯಾಗಿಯೂ ರಾಜದೂತನಾಗಿಯೂ ಪ್ರಸಿದ್ಧ. ಆರ್ಕೇಡಿಯಾದ ಮೆಗಾಲೊಪೊಲಿಸ್‍ನಲ್ಲಿ ಶ್ರೀಮಂತ ರಾಜಕಾರಣಿಯೊಬ್ಬನ ಮಗನಾಗಿ ಹುಟ್ಟಿದ ಈತ ಸಾಹಿತ್ಯ ಇತಿಹಾಸ ರಾಜ್ಯಶಾಸ್ತ್ರಗಳನ್ನೂ ಆಳವಾಗಿ ಅಭ್ಯಾಸ ಮಾಡಿದ. ಮ್ಯಾಸಿಡೋನಿಯ ಕದನದಲ್ಲಿ ರೋಮನರಿಗೆ ಸೆರೆಸಿಕ್ಕಿದರೂ (ಕ್ರಿ.ಪೂ. 168) ಕೆಲವು ಹಿರಿಯ ಅಧಿಕಾರಿಗಳ ನೆರವು ಪಡೆದು ಅಲ್ಲಿ ನೆಲೆನಿಂತ. ಆ ಸಮಯದಲ್ಲಿ ಇವನಿಗೆ ರೋಮನ್ ಸೇನಾನಿ ಸಿಪಿಯೋನ ಪರಿಚಯವಾಯಿತು. ಪಾಲಿಬಿಯಸ್ ಆಫ್ರಿಕ ಮತ್ತು ಇತರ ಪ್ರದೇಶಗಳಲ್ಲಿ ಸಂಚಾರ ಮಾಡಿದ. ರೋಮಿಗೂ ಕಾರ್ತೇಜಿಗೂ ನಡೆದ ಪ್ಯೂನಿಕ್ ಯುದ್ಧಗಳನ್ನು ಪ್ರತ್ಯಕ್ಷವಾಗಿ ನೋಡಿದ. ರೋಮನರು ಗ್ರೀಸನ್ನು ಮುತ್ತಿದಾಗ ಅವರೊಡನೆ ಸಂಧಾನ ನಡೆಸಿ ತನ್ನ ದೇಶಕ್ಕೆ ಅನುಕೂಲಕರವಾದ ಒಪ್ಪಂದ ಆಗುವಂತೆ ಶ್ರಮಿಸಿದ. 

ಪಾಲಿಬಿಯಸ್ ತನ್ನ ಇತಿಹಾಸ ಗ್ರಂಥದ ರಚನೆಯಿಂದಾಗಿ ಖ್ಯಾತನಾಗಿದ್ದಾನೆ. ಕಿ.ಪೂ. 266 ರಿಂದ ಕ್ರಿ.ಪೂ. 146ರ ವರೆಗಿನ ರೋಮಿನ ಮತ್ತು ಹತ್ತಿರದ ದೇಶಗಳ ಸಾಮಾನ್ಯ ಇತಿಹಾಸವನ್ನು ಕುರಿತು ಇವನು ಬರೆದ 40 ಪುಸ್ತಕಗಳ ಪೈಕಿ ಮೊದಲ ಐದು ಸಮಗ್ರವಾಗಿಯೂ ಮಿಕ್ಕವುಗಳಲ್ಲಿ ಕೆಲವು ತುಣುಕುಗಳಲ್ಲೂ ಉಳಿದಿವೆ. ಪಾಲಿಬಿಯಸ್ ಉತ್ತಮ ಚರಿತ್ರಾಕಾರನಾಗಿದ್ದುದಲ್ಲದೆ, ಚರಿತ್ರೆಯ ಲಕ್ಷಣ, ಉದ್ದೇಶ ಗುರಿ, ವ್ಯಾಪ್ತಿ ಇವನ್ನು ಕೂಡ ವಿವರಿಸಿದ್ದಾನೆ. ಇತಿಹಾಸಶಾಸ್ತ್ರ ಬೆಳೆಯಲು ಕಾರಣನಾಗಿದ್ದಾನೆ.

ಇತಿಹಾಸದ ಅಧ್ಯಯನ ಎಲ್ಲರಿಗೂ ಅಮೂಲ್ಯವಾದುದ್ದೆಂದು ಪಾಲಿಬಿಯಸ್ ನಂಬಿದ್ದ. ರಾಜಕೀಯ ಚಟುವಟಿಕೆಗಳಿಗೆ ಅಗತ್ಯವಾದ ಶಿಕ್ಷಣವನ್ನೂ ತರಬೇತಿಯನ್ನೂ ಇತಿಹಾಸದ ಅಧ್ಯಯನ ನೀಡುತ್ತದೆಂಬುದನ್ನು ಇತಿಹಾಸಕಾರರೆಲ್ಲ ಒತ್ತಿ ಹೇಳಿದ್ದಾರೆ ಎಂದು ಪಾಲಿಬಿಯಸ್ ಹೇಳುತ್ತಾನೆ. ಬಾಳಿನಲ್ಲಿ ಕಷ್ಟಕಾರ್ಪಣ್ಯಗಳನ್ನು ಧೈರ್ಯದಿಂದ ಎದುರಿಸಲು ಇರುವ ಏಕೈಕ ಮಾರ್ಗವೆಂದರೆ ಇತರರ ಕಷ್ಟಗಳನ್ನು ನೆನಸಿಕೊಳ್ಳುವುದು ಎನ್ನುತ್ತಾನೆ. ಮನಸ್ಥೈರ್ಯ, ವಾಸ್ತವ ಜೀವನದ ಅನುಭವ ಇವೇ ಇತಿಹಾಸದ ಅಧ್ಯಯನದ ಪ್ರಯೋಜನ ಎಂಬುದು ಇವನ ನಂಬಿಕೆ. ಚರಿತೆÀ್ರಯೆಂದರೆ ಕೌತುಕವಲ್ಲ, ಉತ್ಪ್ರೇಕ್ಷೆಯಲ್ಲ; ಅದು ಭಾವೋದ್ರೇಕಗೊಳಿಸಬೇಕಾಗಿಲ್ಲ. ನಡೆದದ್ದನ್ನು, ಅದು ಎಷ್ಟೇ ಸಾಮಾನ್ಯವಾಗಿರಲಿ, ನಡೆದಂತೆ ವಿವರಿಸುವುದು ಚರಿತ್ರೆಯ ಗುರಿ. ಚರಿತ್ರಕಾರ ಸತ್ಯಕ್ಕೆ ಬದ್ಧನಾಗಿರಬೇಕು ಎನ್ನುವುದನ್ನು ಪಾಲಿಬಿಯಸ್ ಸಾರಿಸಾರಿ ಹೇಳುತ್ತಾನೆ. ಸಮಕಾಲೀನ ಇತಿಹಾಸಕಾರರ ಬರವಣಿಗೆಯ ದೋಷಗಳನ್ನು ಖಂಡಿಸಿರುವ ಪಾಲಿಬಿಯಸ್ ಸಾರ್ವತ್ರಿಕ ಸತ್ಯದ ದರ್ಶನ ಮಾಡಿಸುವುದು ತನ್ನ ಬರವಣಿಗೆಯ ಮುಖ್ಯ ಗುರಿ ಎಂದು ಹೇಳಿಕೊಂಡಿದ್ದಾನೆ. ಇತಿಹಾಸದ ಸಮಗ್ರ ಚಿತ್ರಣವನ್ನು ನೀಡುವುದೇ ತನ್ನ ಧ್ಯೇಯವೆಂದು ಭಾವಿಸಿ ಇವನು ಬರವಣಿಗೆಯಲ್ಲಿ ಮಗ್ನನಾಗಿದ್ದ.

ಇತಿಹಾಸ ಅಖಂಡವಾದ್ದು. ಒಂದು ದೇಶದಲ್ಲಿ ನಡೆದ ಘಟನೆ ಅಥವಾ ಬೆಳವಣಿಗೆ ಇನ್ನೊಂದು ದೇಶದ ಚರಿತ್ರೆಯ ಮೇಲೆ ಪ್ರಭಾವ ಬೀರುವುದೆಂಬ ಮಾತನ್ನು ಪಾಲಿಬಿಯಸ್ ಮನಗಂಡಿದ್ದ. ಆಧಾರಗಳನ್ನು ಅಭ್ಯಾಸ ಮಾಡಿ ಅವುಗಳಿಂದ ಕ್ರಮಬದ್ಧವಾದ ಮನುಷ್ಯಜೀವನದ ಚಿತ್ರವನ್ನು ಪಡೆಯುವುದು ಇತಿಹಾಸಕಾರರ ಕರ್ತವ್ಯವೆಂದು ಅವನು ನಂಬಿದ್ದ. ನುಡಿದಂತೆ ನಡೆದ ಪಾಲಿಬಿಯಸ್‍ನಿಗೆ ಒಳ್ಳೆಯ ರಾಜಕೀಯ ಮತ್ತು ಸೈನಿಕ ಅನುಭವವಿತ್ತು. ಅದರ ಸಂಪಾದನೆಗಾಗಿ ಇವನು ಹಲವಾರು ದೇಶಗಳಲ್ಲಿ ಸಂಚರಿಸಿದ್ದ. ಸರ್ಕಾರೀ ಕಾಗದ ಪತ್ರ, ಖಾಸಗಿ ದಾಖಲೆಗಳು ಮೊದಲಾದ ಆಧಾರಗಳನ್ನು ಶ್ರಮವಹಿಸಿ ಅಭ್ಯಾಸ ಮಾಡಿ ಇವನು ಗ್ರಂಥ ರಚಿಸಿದ. ಇತಿಹಾಸಕಾರನಿಗೆ ವಾಚಿಕ ಆಧಾರ ಮಹತ್ತ್ವವಾದ್ದೆಂಬ ಅಂಶವನ್ನು ತೋರಿಸಿಕೊಟ್ಟ ಪಾಲಿಬಿಯಸ್ ಅಂದಿನ ಅನೇಕ ಪ್ರಮುಖ ವ್ಯಕ್ತಿಗಳನ್ನು ಸಂದರ್ಶಿಸಿ ಅವರ ಅಭಿಪ್ರಾಯಗಳನ್ನು ಆಧರಿಸಿ ಇತಿಹಾಸ ರಚಿಸಿದ. ತನ್ನ ಇತಿಹಾಸ ರಚನೆಗೆ ಸತ್ಯ ಪ್ರತಿಪಾದನೆಯೇ ಉದ್ದೇಶವೆಂದು ಪಾಲಿಬಿಯಸ್ ದೃಢವಾಗಿ ನಂಬಿದ್ದ. ಜೀವಿಗೆ ಕಣ್ಣು ಹೇಗೋ ಇತಿಹಾಸಕ್ಕೆ ಸತ್ಯ ಹಾಗೆ ಎಂದು ಇವನು ಹೇಳಿದ್ದಾನೆ. ಇವನ ಬರವಣಿಗೆ ಕ್ಲಿಷ್ಟವಾಗಿದ್ದು, ಪುನರುಕ್ತಿಯೇ ಮೊದಲಾದ ದೋಷಗಳಿಂದ ಕೂಡಿದ್ದರೂ ಬಹು ಪ್ರಾಚೀನ ಕಾಲದಲ್ಲಿಯೇ ಆಧುನಿಕ ಇತಿಹಾಸ ರಚನೆಯ ಪದ್ಧತಿಯನ್ನು ಇವನು ಅನುಸರಿಸಿದ್ದನೆಂಬುದನ್ನು ಗಮನಿಸಬೇಕು. ರೋಮನರ ಸಾಮಾಜಿಕ ಜೀವನವನ್ನು ವಿಶ್ಲೇಷಿಸುವಲ್ಲಿ ಕಂಡುಬರುವ ಇವನ ಆಧುನಿಕ ದೃಷ್ಟಿ ಸ್ತುತ್ಯರ್ಹ. ಅಂದು ಪ್ರಚಲಿತವಿದ್ದ ಮೂಢನಂಬಿಕೆಗಳ ವಿರುದ್ಧ ಸಮರ ನಡೆಸಿದ ವಾಸ್ತವವಾದಿ ಹಾಗೂ ವಿಚಾರವಾದಿ ಪಾಲಿಬಿಯಸ್. ಇತಿಹಾಸದಲ್ಲಿ ಇವನು ಎಂಥ ಪಾಂಡಿತ್ಯ ಪಡೆದಿದ್ದನೆಂದರೆ, ಮುಂದಾಗುವುದನ್ನು ಹೇಳಬಲ್ಲವನಾಗಿದ್ದ. ಪ್ರಾಚೀನಕಾಲದಲ್ಲಿ ಆದರ್ಶವೆನ್ನುವಂತೆ ಇವನು ಇತಿಹಾಸವನ್ನು ರಚಿಸಿದನಲ್ಲದೆ ಸರ್ವ ದೇಶ ಕಾಲಗಳಿಗೆ ಅನ್ವಯಿಸುವ ತತ್ತ್ವಗಳನ್ನು ಬರೆದಿಟ್ಟಿದ್ದಾನೆ.			(ಎಂ.ವಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ